ಇಂದು ಏಕೋ ಕಾಡಿದೆ


ಇಂಗು ತೆಂಗು ಇಲ್ಲದಿರೆ ಅಡುಗೆ ಮಾಡಲಾರೆನೆಂದು
ಕುಪಿಸಿ ಕುಳಿತ ಅಮ್ಮನ ನೆನಪು 
ಇಂದು ಏಕೋ ಕಾಡಿದೆ...

ಬೆವರು ಸುರಿಸಿ ಕೆಲಸ ಮುಗಿಸಿ, ಬೆಣ್ಣೆ ಬಿಸ್ಕತ್ತು ಕೈಲಿ ಹಿಡಿದು 
ಪ್ರೀತಿಯಿಂದ ಉಣಿಸುತಿದ್ದ ಅಪ್ಪನ ನೆನಪು
ಇಂದು ಏಕೋ ಕಾಡಿದೆ ...

ಬೇಡವೆಂದರೆ ಬೈದು ಗದರಿಕೊನೆಗೆ ಪ್ರೀತಿ ಬೆರೆಸಿ ಕಲಸಿ 
ಮುದ್ದು ಮಾಡಿ ತಿನಿಸುತಿದ್ದ ಅಮ್ಮನ ನೆನಪು
ಇಂದು ಎನಗೆ ಕಾಡಿದೆ ...

ಹೆಚ್ಚು ಅಂಕ ಎನಗೆ ಬಂದರೆ ಊರಿಗೆಲ್ಲ ಸಿಹಿಯ ಹಂಚಿ
ಗರ್ವದಿಂದ ಬೀಗುತಿದ್ದ ಅಪ್ಪನ ನೆನಪು
ಇಂದು ಎನಗೆ ಕಾಡಿದೆ ...

ಮಾಡಿದಡುಗೆ ಕಡಿಮೆ ಬಂದರೆ, ಎನಗೆ ಹೊಟ್ಟೆ ತುಂಬಾ ಕೊಟ್ಟು
ನೀರು ಕುಡಿದು ಮಲಗುತಿದ್ದ ಅಮ್ಮನ ನೆನಪು
ಬಹಳ ಬಹಳ ಕಾಡಿದೆ ...

ಹರಿದ ಅಂಗಿಯ ಹೊಲಿಗೆ ಮೇಲೆ, ಹೊಲಿಗೆ ಹಾಕಿ ತೊಟ್ಟ ತಾನು
ಎನಗೆ ಹೊಸತು ದಿರಿಸು ಕೊಡಿಸಿ ಖುಷಿಯ ಪಟ್ಟ ಅಪ್ಪನ ನೆನಪು
ಬಹಳ ಬಹಳ ಕಾಡಿದೆ...

Comments

Post a Comment